ರಾಥೋರರು -
ಭಾರತದ ವಾಯುವ್ಯ ಭಾಗದ ಪ್ರದೇಶ ಹಿಂದಿನ ರಜಪುತಾನದ (ಇಂದಿನ ರಾಜಸ್ತಾನ) ರಾಜ್ಯದ 36 ಬುಡಕಟ್ಟುಗಳಲ್ಲಿನ ಒಂದು ಪ್ರಮುಖ ರಾಜಮನೆತನ. ರಾಜಸ್ತಾನದ ಸು. 12 ನೆಯ ಶತಮಾನದ ಕೊನೆಯಿಂದ 18 ನೆಯ ಶತಮಾನದಲ್ಲೂ ಮುಂದೆ ಭಾರತಕ್ಕೆ ಸ್ವಾತಂತ್ರ್ಯ ಬರುವವರೆಗೂ ಬ್ರಿಟಿಷರ ಆಶ್ರಿತ ಸಂಸ್ಥಾನವಾಗಿ ತಮ್ಮ ಅಸ್ತಿತ್ವವನ್ನು ಇವರು ಉಳಿಸಿಕೊಂಡಿದ್ದರು.
ಮಾರವಾಡ ಮತ್ತು ಬಿಕಾನೀರ್‍ಗಳ ದಾಯಾದಿ ರಾಥೋರರ ರಾಜಮನೆತನಗಳು ತಾವು ಕನೌಜ್‍ನ ಗಾಹದ್ವಾಲ (ನೋಡಿ- ಗಾಹದ್ವಾಲ-ಮನೆತನ) ರಾಜಪುತ್ರ ಮನೆತನದ ಶಾಖೆಗಳೆಂದು ಹೇಳಿಕೊಂಡಿವೆ. ಅದರೆ ಇತಿಹಾಸ ಸಂಶೋಧಕರು ಈ ಅಂಶವನ್ನು ಅಲ್ಲಗಳೆದು ರಾಥೋರರಿಗೂ ಗಾಜದ್ವಾಲ ಮನೆತನಕ್ಕೂ ವಿವಾಹ ಸಂಬಂಧ ನಡೆಯುತ್ತಿದ್ದುದರ ಜೊತೆಗೆ ಇತರ ಆಧಾರಗಳಿಂದ ರಾಥೋರರ ಮನೆತನದವರು ಉತ್ತರ ಭಾರತದಲ್ಲಿ ನೆಲೆಸಿದ ಕರ್ನಾಟಕದ ರಾಷ್ಟ್ರಕೂಟ ಮನೆತನದ ಶಾಖೆಯೊಂದರ ವಂಶೀಕರೆಂದು ನಿರೂಪಿಸಿದ್ದಾರೆ. ಬದೌನ್ ರಾಷ್ಟ್ರಕೂಟ ಶಾಖೆ ಎಂಟು, ಒಂಬತ್ತನೆಯ ಶತಮಾನದಲ್ಲೇ ನೆಲೆಸಿದ್ದಿತು. ಈ ಮನೆಯನದವರು ತರುವಾಯ ರಾಠೌಡ ಎಂಬ ಹೆಸರು ಪಡೆದರು. ಇವರು ಹಸ್ತಿಕುಂಡಿ ಅಥವಾ ಈಗಿನ ಹಠಿವುಂಡಿಯ ರಾಷ್ಟ್ರಕೂಟರ ಉತ್ತರಾಧಿಕಾರಿಗಳು. ಅಲ್ಲಿ ಹತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟರು ಆಳುತ್ತಿದ್ದದಕ್ಕೆ ಶಾಸನಗಳು ದೊರೆತಿವೆ. ಈ ಮನೆತನದ ಸೀಹನೆಂಬ ರಾಜ 1273 ರಲ್ಲಿ ಮೃತನಾದ. ಸೀಹನ ಮಗ ಆಸ್ಥಾನ ಮತ್ತು ಆತನ ಮಗ ಧೂಹಡನ ಬಗ್ಗೆ ಜೋಧಪುರ ರಾಜ್ಯದ ಪಚ್‍ಭದ್ರ ಜಿಲ್ಲೆಯಲ್ಲಿ ದೊರೆತಿರುವ ಶಾಸನಗಳಲ್ಲಿ ಉಲ್ಲೇಖವಿದೆ. ಧೂಹಡ 1309 ರಲ್ಲಿ ನಿಧನನಾದ ಬಗ್ಗೆ ಶಾಸನವೊಂದರಿಂದ ತಿಳಿದುಬರುತ್ತದೆ. ಅವನೇ ಮಾರವಾಡ ಅಥವಾ ಮಾರವಾರದ ರಾಥೋರ್ ಮನೆತನದ ಸ್ಥಾಪಕ. ಅವನು ಖೇರನ್ನು ವಶಪಡಿಸಿಕೊಂಡು ಅಲ್ಲಿನ ಗೊಹಿಲ್ ರಾಜನನ್ನು ಪದಚ್ಯುತಿಗೊಳಿಸಿ ತನ್ನ ಅಧಿಕಾರವನ್ನು ಸ್ಥಾಪಿಸಿದ.

ಹದಿನಾಲ್ಕನೆಯ ಶತಮಾನದಲ್ಲಿ ರಾಥೋರರ ಇತಿಹಾಸ ಮಹತ್ತ್ವದ ಘಟನೆಗಳಿಂದ ಕೂಡಿದ್ದೆಂದರೂ ಸ್ಪಷ್ಟವಾದ ಆಧಾರಗಳಿಲ್ಲದೆ ಮಸುಕಾಗಿದೆ. ಇಲ್ಲಿನ ಕಥನದ ಪ್ರಕಾರ ಧೂಹಡ ರಾಯಪಾಲ, ಕನ್ಹಾಪಾಲ, ಜಲನ್ಸಿ, ಛಡೋ. ತಿಡೊ, ಸಲ್‍ಖಾ ಮತ್ತು ಮಲ್ಲಿನಾತರು ಈ ಶತಮಾನದಲ್ಲಿ ಅನುಕ್ರಮವಾಗಿ ಆಳಿರುವುದು ತಿಳಿದುಬರುತ್ತದೆ.  ಇವರೆಲ್ಲರ ಸಂಬಂಧಗಳೂ ಕ್ರಮವಾಗಿ ತಂದ ತಂದೆ ಮಗನ ಸಂಬಂಧಗಳೆಂದು ಸಹ ಹೇಳಲಾಗಿದೆ. ಆದರೆ ಇತಿಹಾಸಕಾರರು ಈ ವಂಶಪರಂಪರೆ ಕಾಲಾನುಕ್ರಮದಂತೆ ಸಂಗತವಾಗಿಲ್ಲವೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಅದರೂ ಈ ಮನೆತನದ ಪ್ರಮುಖ ಏಳುಬೀಳುಗಳನ್ನು ಗುರುತಿಸಲು ಅನೇಕ ಆಧಾರಗಳು ದೊರೆತಿವೆ.

ದೆಹಲಿ ಸುಲ್ತಾನಶಾಹಿ ಅಲಾವುದ್ದೀನ್ ಖಿಲ್ಜಿ (1296 - 1316) ಮಾರವಾರ ಮತ್ತು ಗುಜರಾತ್‍ಗಳನ್ನು ವಶಪಡಿಸಿಕೊಂಡ. ಇದರಿಂದಾಗಿ ರಾಥೋರರು ಮುಸಲ್ಮಾನರೊಡನೆ ಸೆಣಸುವುದು ಅನಿವಾರ್ಯವಾಯಿತು. ಇವರೊಂದಿಗೆ ನಡೆಸಿದ ಯುದ್ಧಗಳಲ್ಲಿ ರಾಥೋರ ಮನೆತನದ ರಾಜರುಗಳಾಗಿದ್ದ ಕನ್ಹಾಪಾಲ, ಜಲನ್ಸಿ, ಮತ್ತು ತಿಡೊ ಎಂಬವರು ಬೇರೆ ಬೇರೆ ಕಾಲದಲ್ಲಿ ಹತರಾದರೆಂದು ತಿಳಿದುಬರುತ್ತದೆ. ಸಲ್‍ಖಾ ಮತ್ತು ಮಲ್ಲಿನಾಥರು ಮುಸ್ಲಿಮರ ಪರಮಾಧಿಕಾರವನ್ನು ಒಪ್ಪಿಕೊಂಡು ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಹದಿನಾಲ್ಕನೆಯ ಶತಮಾನ ಬಹುಭಾಗ ಅಲ್ಲಾವುದ್ದೀನ್ ಖಿಲ್ಜಿ, ಮಹಮ್ಮದ್ ಬಿನ್ ತುಘಲಕ್ ಮತ್ತು ಫಿರೋಜ್ ಷಾಹರಂತಹ ಪ್ರಬಲ ಸುಲ್ತಾನರು ದೆಹಲಿಯಲ್ಲಿ ಆಳುತಿದ್ದುದರಿಂದ ರಾಥೋರರಿಗೆ ತಮ್ಮ ರಾಜ್ಯವನ್ನು ವಿಸ್ತರಿಸಲು ಆಸ್ಪದವಾಗಲಿಲ್ಲ.
ರಾಥೋರ ರಾಜ್ಯದ ಮೂರು ದಿಕ್ಕಿನಲ್ಲಿ ಮುಸ್ಲಿಂ ಅಧೀನಪ್ರದೇಶಗಳಿದ್ದರೆ ವಾಯುವ್ಯಕ್ಕೆ ಭಟ್ಟಿಗಳೆಂಬ ಹಿಂದೂ ರಾಜ್ಯ ಪ್ರದೇಶವಿತ್ತು. ಆ ಭಟ್ಟಿಗಳೊಂದಿಗೂ ಇವರು ಯುದ್ಧಗಳನ್ನು ನಡೆಸಿದರು. ತಿಡೋನು ಮಡಿದಾಗ ಅವನ ಮಕ್ಕಳಾದ ಕಾನ್ಹಡ ಮತ್ತು ಸಲ್‍ಖಾರ ನಡುವೆ ಉತ್ತರಾಧಿಕಾರಕ್ಕಾಗಿ ಪೈಪೋಟಿ ನಡೆಯಿತು. ಸಲ್‍ಖಾನ ಮಗ ಮಲ್ಲಿನಾಥನು ರಾವ್ ಎಂಬ ಬಿರುದು ಧರಿಸಿ ಖೇರ್‍ಗೆ ಸಮೀಪದ ಮೆವೊಯಿಂದ ಆಳಲು ಪ್ರಾರಂಭಿಸಿದ. ದೆಹಲಿಯ ಸುಲ್ತಾನರ ಆಳ್ವಿಕೆ ದುರ್ಬಲವಾದಾಗ ಮಲ್ಲಿನಾಥ ರಾಜ್ಯವನ್ನು ವಿಸ್ತರಿಸಿದ. ಆದರೆ ಮಲ್ಲಿನಾಥನ ನಿಧನಾನಂತರ ಆತನ ಮಗನಿಗೆ ಸಿಂಹಾಸನ ದೊರೆಯದೆ ಆತನು ತಮ್ಮ ವೀರಮಾಜೀಯ ಮಗ ಚುಂಡಾ ಅಧಿಕಾರಕ್ಕೆ ಬಂದ.

ಚುಂಡಾನ ಕಾಲದಲ್ಲಿ ಪ್ರತಿಹಾರರ ಅಥವಾ ಪರಿಹಾರರ ಮಾಂಡೋರ್ ಪಟ್ಟಣ ಮಾರವಾರ ರಾಜ್ಯಕ್ಕೆ ಸೇರಿತು. ಅಲ್ಲಿನ ಮುಸ್ಲಿಂ ಆಳ್ವಿಕೆಯನ್ನು ಚುಂಡಾ ಕೊನೆಗಾಣಿಸಿದ್ದ. ಅವನು ತನ್ನ ರಾಜಧಾನಿಯನ್ನು ಮೆವೊದಿಂದ ಮಾಂಡೋರ್‍ಗೆ ವರ್ಗಾಯಿಸಿದ. ಚುಂಡಾ ಮೇವರದ ಸಿಸೋದಿಯ ಮನೆತನದೊಂದಿಗೆ ವಿವಾಹ ಸಂಬಂಧ ಬೆಳೆಸಿದ್ದು ರಾಥೋರರ ಪ್ರತಿಷ್ಠೆ ಹೆಚ್ಚಲು ಕಾರಣವಾಯಿತು. ಅವರ ಬರಂಬಲದಿಂದ ಚುಂಡಾ ಮುಸ್ಲಿಮರ ಪ್ರಬಲ ನೆಲೆಯಾಗಿದ ನಾಗೌರನ್ನು ಆಕ್ರಮಿಸಿ ಕೊಂಡ. ಆದರೆ ಮುಂದೆ ಮುಸ್ಲಿಮರ ಸಂಯುಕ್ತ ಸೈನ್ಯದೊಡನೆ ಹೋರಾಡುತ್ತ 1422 ರಲ್ಲಿ ಚುಂಡಾ ಮೃತನಾದ. ಆತನ ಮಕ್ಕಳಲ್ಲಿ ಉತ್ತರಾಧಿಕಾರದ ವಿವಾದ ಉಂಟಾಗಿ ಕೊನೆಗೆ ಆತನ ಹಿರಿಯ ಮಗ ರಣಮಲ್ಲ ಸಿಂಹಾಸನವೇರಿದ. ಇವನ ಕಾಲದಲ್ಲಿ ಮಾರವಾರ ಮತ್ತು ಮೇವಾರ ರಾಜ್ಯಗಳು ನಡೆಸಿದ ಜಂಟಿ ಕಾರ್ಯಾಚರಣೆಗಳಿಂದಾಗಿ ನಾಗೌರ್ ಪ್ರಾಂತ್ಯ ಇವರ ವಶವಾಯಿತು. ಅದನ್ನು ಎರಡೂ ರಾಜ್ಯಗಳು ಹಂಚಿಕೊಂಡವು. ದುರದೃಷ್ಟವಶಾತ್ ಮೇವಾರದ ವಿದ್ಯಮಾನಗಳಲ್ಲಿ ರಣಮಲ್ಲ ಅತಿಯಾಗಿ ಮಧ್ಯೆಪ್ರವೇಶಿಸಿದ್ದರಿಂದ ಅಲ್ಲಿನ ಸರದಾರರು ಸಹಿಸದೆ ರಣಮಲ್ಲನನ್ನು 1438 ರಲ್ಲಿ ಕೊಂದುಹಾಕಿದರು.

ರಣಮಲ್ಲನ ಮಗ ಜೋಧ ನಿರಾಶ್ರಿತನಾಗಿ ಮರುಭೂಮಿಯಲ್ಲಿ ಅಲೆಯಬೇಕಾಯಿತು. ಗುಜರಾತ್ ಮತ್ತು ಮಾಳ್ವದ ಸುಲ್ತಾನರ ಜಂಟಿ ಕಾರ್ಯಚರಣೆಯಿಂದಾಗಿ ಮೇವಾರದ ರಣಾ ಕುಂಬ ದುರ್ಬಲನಾದ ಸಂದರ್ಭವನ್ನು ಬಳಸಿಕೊಂಡು ಜೋಧ ಚೇತರಿಸಿಕೊಂಡ. ಇವನು ಮೇವಾರದ ಸಿಸೋದಿಯಾ ಸರ್ದಾರರನ್ನು ತನ್ನ ರಾಜ್ಯದಿಂದ ಹೊರಹಾಕಿದ. ಮಾಂಡೋರ್ ಮತ್ತು ಅಜ್ಮೀರ್‍ಗಳು ಸೇರಿ ಅನೇಕ ಮುಖ್ಯಸ್ಥಳಗಳು ಮೇವಾರ ರಾಜ್ಯಕ್ಕೆ ಸೇರಿದವು. 1459 ರಲ್ಲಿ ಇವನು ಲೂನಿ ನದಿಯ ದಂಡೆಯಲ್ಲಿ ಒಂದು ರಾಜಧಾನಿಯನ್ನು ಸ್ಥಾಪಿಸಿದ. ಅದು ಮುಂದೆ ಇವನ ಹೆಸರಿನಲ್ಲಿ ಜೋಧಪುರವೆಂದು ಪ್ರಸಿದ್ಧಿಗೆ ಬಂತು.

ಜೋಧನಿಗೆ ಹದಿನೇಳು ಗಂಡು ಮಕ್ಕಳಿದ್ದರು. ಇವರಲ್ಲಿ ಕೆಲವರು ಹೊಸ ಪ್ರದೇಶಗಳಿಗೆ ಹೋಗಿ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡರು. ಹೀಗೆ ಅಸ್ತಿತ್ವಕ್ಕೆ ಬಂದ ಪುಟ್ಟರಾಜ್ಯಗಳಲ್ಲಿ ಸಾತಲ್‍ನ ಹೆಸರಿನ ಸಾತರಲ್‍ಮೇರ್ ಮತ್ತು ಬೀಕಾನ ಹೆಸರಿನ ಬಿಕನೀರ್ ಮುಖ್ಯವಾದವು. ದುದಾ ಎಂಬನು ಮೆರ್ತನದಿಂದ ಆಳತೊಡಗಿದೆ. ಮುಂದೆ ಇವು ರಾಥೋರ ಮನೆತನದ ಶಾಖೆಗಳಾದವು.
1488 ರಲ್ಲಿ ಜೋಧ ನಿಧನನಾದ. ತರುವಾಯದ ನಲವತ್ತು ವರ್ಷಗಳಲ್ಲಿ ಮೂವರು ರಾಜರು ಆಳಿದರು. ಅವರೆಂದರೆ ಸಾತಲ್ (1488 - 91) ಸುಜಾ, 1491 - 1515 ಮತ್ತು ಗಾಂಗಾ (1515 - 540. ಈ ಅವಧಿಯಲ್ಲಿ ಉತ್ತರಾಧಿಕಾರಕ್ಕಾಗಿ ಒಳಜಗಳಗಳು ಹೆಚ್ಚಿದುವು. ಕೇಂದ್ರ ಅಧಿಕಾರ ತನ್ನ ಶಾಖಾ ಮನೆತನಗಳ ಮೇಲೆ ಹತೋಟಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದಿತು. ಹದಿನಾರನೆಯ ಶತಮಾನದ ಪೂರ್ವಾರ್ಧದಲ್ಲಿ ದೆಹಲಿಯ ಮೊಗಲ್ ಆಳ್ವಿಕೆ ಸ್ಥಾಪಿತವಾದರೂ ಅದು ಸ್ಥಿರಗೊಂಡಿರದಿದ್ದುದರಿಂದ ರಾಜಪುತಾನದಲ್ಲಿನ ಮನೆತನಗಳ ನಡುವೆ ಹೋರಾಟಗಳು ನಡೆಯುತ್ತಲೇ ಇದ್ದುವು. ರಾಥೋರರು ಅಜ್ಮೀರವನ್ನು ವಶಪಡಿಸಿಕೊಂಡಿದ್ದು ಈ ಕಾಲದ ಮುಖ್ಯ ಸಾಧನೆಯಾಯಿತು.

ರಾಥೋರರ ರಾಜ್ಯ ಇತರ ಅನೇಕ ರಜಪೂತ ರಾಜ್ಯಗಳಂತೆ ಕುಲ ಪ್ರಧಾನವಾಗಿದ್ದಿತು. ಇದರಲ್ಲಿ ರಾಜನ ರಕ್ತಸಂಬಂಧಿಗಳು ಪ್ರಾಂತ್ಯಾಧಿಕಾರಿಗಳಾಗಿ ಮತ್ತು ಸರದಾರರಾಗಿ ಇರುತ್ತಿದ್ದರು. ರಾಜನ ವೈಯಕ್ತಿಕ ಸಾಮಥ್ರ್ಯದ ಮೇಲೆ ಆಡಳಿತದ ದಕ್ಷತೆ ಅವಲಂಬಿಸಿದ್ದಿತು.

ದೆಹಲಿ ಸಿಂಹಾಸನಕ್ಕೆ ಅಕ್ಬರ್ ಉತ್ತರಾಧಿಕಾರಿಯಾಗಿ ಬಂದ ಮೇಲೆ ಉತ್ತರ ಭಾರತದ ರಾಜಕೀಯ ಚಿತ್ರವೇ ಬದಲಾಯಿತು. ಅಕ್ಬರ್ ತನ್ನ ಸಾಮ್ರಾಜ್ಯದ ವಿತರಣೆ ಮತ್ತು ಭದ್ರತೆಗೆ ಹೆಚ್ಚು ಗಮನ ನೀಡಿದ. 1561 ರಲ್ಲಿ ಇವನು ರಾಜಪುತಾನವನ್ನು ಪ್ರವೇಶಿಸಿ ಜೋಧಪುರದ ಮೇಲೆ ಧಾಳಿ ಮಾಡಿದ. ಮೇವಾರದ ಚಿತ್ತೂರನ್ನು ವಶಪಡಿಸಿಕೊಂಡು ಸಾವಿರಾರು ಜನರ ಹತ್ಯೆಗೈದ. ಇದರಿಂದಾಗಿ ಇಡೀ ರಾಜಪುತಾನವೇ ತಲ್ಲಣಿಸಿ ಹೋಯಿತು. ಆದರೆ ಅಕ್ಬರ್ ಮುಂದೆ ರಾಜಪುತ್ರರಾಜರ ಶಕ್ತಿ ಸಾಮಥ್ರ್ಯಗಳು ಮತ್ತು ಧೈರ್ಯಸಾಹಸಗಳನ್ನು ತನ್ನ ಸಾಮ್ರಾಜ್ಯದ ಅಭ್ಯುದಯಕ್ಕಾಗಿ ಬಳಸಿಕೊಳ್ಳುವ ನಿರ್ಧಾರ ಮಾಡಿದ. ಅದರ ಪರಿಣಾಮವಾಗಿ ಅನೇಕ ರಾಜರುಗಳು ಇವನಿಗೆ ಹೆಣ್ಣುಮಕ್ಕಳನ್ನು ಕೊಟ್ಟು ರಕ್ತಸಂಬಂಧ ಬೆಳಸಿದರು. ಅನೇಕ ರಾಜರು ದೆಹಲಿಯ ಆಸ್ಥಾನದಲ್ಲಿದ್ದು ಸಾಮ್ರಾಜ್ಯದ ಹಿತಕ್ಕಾಗಿ ದುಡಿದರು. ಅಂತವರಲ್ಲಿ ಜೋಧಪುರದ ಜಸವಂತ ಸಿಂಹ ಒಬ್ಬ. ಔರಂಗಜೇಬನ ಕಾಲದಲ್ಲಿ ಮೊಗಲು ಮತ್ತು ರಜಪುತಾನದ ರಾಜರುಗಳ ಸಂಬಂಧ ಹದಗೆಟ್ಟಿತು. ಜಸವಂತ ಸಿಂಹನನ್ನು ಔರಂಗಜೇಬ ದಖ್ಖನ್ನಿನಿಂದ ವಾಯುವ್ಯ ಸರಹದ್ದಿಗೆ ವರ್ಗಾಯಿಸಿದ. ಅಲ್ಲಿ 1679 ರಲ್ಲಿ ಅವನು ಸೈನಿಕ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮೃತನಾದ. ಆಗ ಔರಂಗಜೇಬ ಜೋಧಪುರ ರಾಜ್ಯವನ್ನು ವಶಪಡಿಸಿಕೊಂಡು ತನ್ನ ಅಧೀನಕ್ಕೆ ತಂದುಕೊಂಡ. ಇವನು ಮಾರವಾರದ ಜಸವಂತ ಸಿಂಹನ ಇಬ್ಬರು ಪತ್ನಿಯರು ತಲಾ ಒಬ್ಬೊಬ್ಬ ಗಂಡು ಮಕ್ಕಳಿಗೆ ಜನ್ಮ ನೀಡಿದರು. ಅವರಲ್ಲಿ ಉಳಿದುಕೊಂಡ ಅಜಿತ್ ಸಿಂಹ ಎಂಬುವನು ರಾಜ್ಯದ ಹಿತೈಷಿ ಮಂತ್ರಿಯೊಬ್ಬನ ಆರೈಕೆಯಲ್ಲಿ ಬೆಳೆದ. ಔರಂಗಜೇಬ ಈ ಬಾಲಕನ ಹಕ್ಕುದಾರಿಕೆಯನ್ನು ನಿರ್ಲಕ್ಷಿಸಿದ ಹಾಗೂ ಇವನನ್ನು ಇಸ್ಲಾಂ ಧರ್ಮವನ್ನೊಪ್ಪಲು ಒತ್ತಾಯಿಸಿದ. ಔರಂಗಜೇಬ್ ದಖ್ಖನ್ನಿನ ವ್ಯವಹಾರಗಳಲ್ಲಿ ಮುಳುಗಿದಾಗ ಮೇವಾರದ ಅರಸಮನೆತನ ಪುನಶ್ಚೇತನಗೊಂಡು ಅಜಿತ್‍ಸಿಂಹ ಅಧಿಕಾರಕ್ಕೆ ಬಂದ.

1709 ರಲ್ಲಿ ಔರಂಗಜೇಬನ ಮಗ ಮತ್ತು ಉತ್ತರಾಧಿಕಾರಿ ಬಹದ್ದೂರ್ ಷಾ ಅಜಿತ್‍ಸಿಂಹನಿಗೆ ಮಾನ್ಯತೆ ನೀಡಿದ. ಹದಿನೆಂಟನೆಯ ಶತಮಾನದ ಪ್ರಥಮಾರ್ಧದಲ್ಲಿ ಮಾರವಾರ ಅಥವಾ ಜೋಧಪುರ ರಾಜ್ಯ ಮೊಗಲರು ಮತ್ತು ಮರಾಠರು ಮೇಲುಗೈಗಾಗಿ ನಡೆಸಿದ ಹೋರಾಟದಲ್ಲಿ ನೆಮ್ಮದಿಯನ್ನು ಕಳೆದುಕೊಂಡಿತು. ಮರಾಠರು ಇತರ ರಜಪೂತ ರಾಜ್ಯಗಳಂತೆಯೇ ಜೋಧಪುರವನ್ನು ಕೊಳ್ಳೆಹೊಡೆದರು. ಜೊತೆಗೆ ಮುಸ್ಲಿಂ ನಾಯಕನೊಬ್ಬನ ನೇತೃತ್ವದಲ್ಲಿ ಪಿಂಡಾರಿಗಳು ಜನರ ಸುಲಿಗೆ ಮಾಡುತ್ತಿದ್ದರು. ಆಗಾಗ ಆಫ್ಘಾನಿಸ್ತಾನದ ಮೂಲಕ ಮೂಲದ ಪಠಾಣರು ಧಾಳಿ ಮಾಡುತ್ತಿದ್ದರು. ಮರಾಠರು ಪಾಣಿಪಟ್ ಯುದ್ಧದಲ್ಲಿ (1761) ಆಫ್‍ಘನ್ನರಿಗೆ ಸೋತ ಅನಂತರ ಜೋಧಪುರ ರಾಜ್ಯ ಇತರ ರಜಪೂತ ರಾಜ್ಯಗಳಂತೆಯೇ ಉಸಿರಾಡತೊಡಗಿತು.
ಬ್ರಿಟಿಷರು ಭಾರತದ ಮೇಲೆ ಕ್ರಮೇಣ ಹತೋಟಿ ಸಾಧಿಸತೊಡಗಿದ್ದು ಹತ್ತೊಂಬತ್ತನೆಯ ಶತಮಾನದ ಪ್ರಾರಂಭಕ್ಕೆ ಮರಾಠರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಬ್ರಿಟಿಷರು ಮತ್ತು ಮರಾಠರ ನಡುವೆ ಆದ ಒಪ್ಪಂದದ ಮೇರೆಗೆ ಜೋಧಪುರ ರಾಜ್ಯ 1818ರಲ್ಲಿ ಬ್ರಿಟಿಷರ ಆಶ್ರಿತ ರಾಜ್ಯವಾಗಿ ಪರಿವರ್ತಿತವಾಯಿತು. ಬಿಕನೀರ್ ಕೂಡ ಈ ಪದ್ಧತಿಗೆ ಸೇರಿತು. ಬ್ರಿಟಿಷರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಒಳಾಡಳಿತ ಸ್ವಾತಂತ್ರ್ಯ ಮಾತ್ರ ರಾಥೋರ ರಾಜರಿಗೆ ಉಳಿಯಿತು. ಇತರ ಕೆಲವು ರಾಜ್ಯಗಳಂತೆಯೇ ಜೋಧಪುರ ಒಂದನೆಯ ದರ್ಜೆಯ ಸಂಸ್ಥಾನಗಳ ಸಾಲಿಗೆ ಸೇರಿತು.
ಭಾರತ ಸ್ವಾತಂತ್ರ್ಯ ಪಡೆದಾಗ ಇದು ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. 1949ರಲ್ಲಿ ರಾಜಸ್ತಾನ ರಾಜ್ಯದ ಭಾಗವಾಯಿತು. ಜೋಧಪುರದಲ್ಲಿ ದೊಡ್ಡ ಕೋಟೆ ಮತ್ತು ಅರಮನೆಗಳಿಗೆ. ಸೂರ್‍ಸಿಂಹ ಕಟ್ಟಿಸಿದ ಮೋತಿಮಹಲ್, ಅಭಯ ಸಿಂಹ ಕಟ್ಟಿಸಿದ ಪೂಲ್ ಮಹಲ್ ಸುಂದರವಾಗಿದೆ.  ಮಾಂಡೋರ್‍ನಲ್ಲಿ ಜೋಧಪುರದ ಸಂಸ್ಥಾನಿಕರ ಸ್ಮಾರಕ ಪ್ರತಿಮೆಗಳಿವೆ.
								(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ